ಕಲಬುರ್ಗಿ : ಆಳಂದ್ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಪ್ರಕರಣದ ತೀವ್ರ ತನಿಖೆಗೆ ಒತ್ತಾಯಿಸಿ, ವಿದ್ಯಾರ್ಥಿಗಳ ಭದ್ರತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಜಾರಿಗೆ ಒತ್ತು ನೀಡುವ ಸಲುವಾಗಿ ಆಗಸ್ಟ್ 5 ರಂದು ವಿವಿಧ ಸಂಘಟನೆಗಳು ಜಂಟಿಯಾಗಿ ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆಯನ್ನು ಆಯೋಜಿಸಿವೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫೈ), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಮತ್ತು ದಲಿತ ಹಕ್ಕುಗಳ ಸಮಿತಿ, ಕಲಬುರ್ಗಿ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಲಿದೆ. ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳ ಕುರಿತು ಸಮಗ್ರ ತನಿಖೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ, ವಿದ್ಯಾರ್ಜನೆಗೆ ಪೂರಕ ವ್ಯವಸ್ಥೆ, ಮತ್ತು ವಿಶ್ವವಿದ್ಯಾಲಯದಲ್ಲಿ ಹೆಚ್ಚುತ್ತಿರುವ ಕೋಮುವಾದ ಚಟುವಟಿಕೆಗಳನ್ನು ತಡೆಗಟ್ಟಲು ಸಾಂವಿಧಾನಿಕ ನಿಲುವುಗಳ ಜಾರಿಗೆ ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯನ್ನು ಜೆಎಂಎಸ್‌ನ ಅಧ್ಯಕ್ಷೆ ಪದ್ಮಿನಿ ಕಿರಣಗಿ, ಕಾರ್ಯದರ್ಶಿ ಶಾಂತಾ ಘಂಟಿ, ಡಿವೈಎಫೈ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್, ಜಿಲ್ಲಾ ಸಂಚಾಲಕ ಪ್ರಮೋದ ಪಾಂಚಾಳ್, ಸಹಸಂಚಾಲಕ ಸಲ್ಮಾನ್ ಖಾನ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ, ಅಧ್ಯಕ್ಷ ಸರ್ವೇಶ ಮಾವಿನಕರ್, ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಸುಧಾಮ ಧನ್ನಿ, ಮತ್ತು ಸಹಸಂಚಾಲಕ ಪಾಂಡುರಂಗ ಮಾವಿನಕರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಈ ಪ್ರತಿಭಟನೆಯ ಮೂಲಕ ವಿಶ್ವವಿದ್ಯಾಲಯ ಆಡಳಿತವು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ವಾತಾವರಣದ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.