ಪ್ರತಿಭಟನೆ ನಡೆಸುತ್ತಿರುವ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ, ಡಿವೈಎಫ್‌ಐ ಸದಸ್ಯರು ಸಿಯುಕೆ ಗೇಟ್ ಎದುರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ದೃಶ್ಯ.ಕಡಗಂಚಿಯ ಸಿಯುಕೆ ವಿಶ್ವವಿದ್ಯಾಲಯದ ಮುಂದೆ ವಿದ್ಯಾರ್ಥಿನಿ ಆತ್ಮಹತ್ಯೆ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ

ಆಳಂದ, ಆಗಸ್ಟ್ 5:ಕಡಗಂಚಿ ಗ್ರಾಮದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಎದುರು ಬುಧವಾರ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಒಡಿಶಾ ಮೂಲದ ಬಿಎಸ್‌ಸಿ ಭೂಗರ್ಭ ವಿಜ್ಞಾನ ವಿದ್ಯಾರ್ಥಿನಿ ಜಯಶ್ರೀ ನಾಯಕ್ (21) ಅವರು ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಖಂಡಿಸಿ, ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಲು ಈ ಹೋರಾಟ ರೂಪುಗೊಂಡಿತ್ತು.

ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ನಿರ್ಲಕ್ಷಿಸುವ ಆಡಳಿತದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. “ಈ ಹಿಂದೆ ಒಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದರೂ, ಸೂಕ್ತ ಕ್ರಮ ಕೈಗೊಂಡಿರದ ಕಾರಣ ಇಂದು ಜಯಶ್ರೀಯಂತಹ ದುರಂತ ಸಂಭವಿಸಿದೆ,” ಎಂದು ವಿಷಾದ ವ್ಯಕ್ತಪಡಿಸಿದರು. ಕುಲಪತಿಗಳು ಆರ್‌ಎಸ್‌ಎಸ್ ಹಾಗೂ ಬಜರಂಗ ದಳದ ಕಾರ್ಯಕರ್ತರಂತೆ ವರ್ತಿಸುತ್ತಿರುವುದು ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಚಟುವಟಿಕೆಗಳಿಗೆ ದಾರಿತರೆದಿದೆ ಎಂದು ಅವರು ಆರೋಪಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಲವಿತ್ರ ವಿ ಅವರು, ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿರುವುದನ್ನು ಹಾಗೂ ಶಿಕ್ಷಕರು ಸಮಸ್ಯೆಗಳಿಗೆ ಕಿವಿಗೊಡದಿರುವುದನ್ನು ಖಂಡಿಸಿದರು. ಡಾ. ಮೀನಾಕ್ಷಿ ಬಾಳಿ, “ಜಯಶ್ರೀ ತನ್ನ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಬಸವರಾಜ ಕೂಬಕಡ್ಡಿಗೆ ತಿಳಿಸಿದ್ದರೂ, ಅವರು ನಿರ್ಲಕ್ಷ್ಯ ವಹಿಸಿದ್ದರೆಂದು ತಿಳಿದುಬರುತ್ತಿದೆ. ಇದು ಶಿಕ್ಷಕ ವೃಂದಕ್ಕೆ ಅವಮಾನಕರ ಸಂಗತಿ,” ಎಂದು ಹೇಳಿದರು.ಪ್ರತಿಭಟನಾಕಾರರು ಕುಲಪತಿಗಳಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದಾಗ, ಅವರು ಸಭೆಯಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಮುಖ್ಯಗೇಟ್‌ ಮುಚ್ಚಿ ಘೋಷಣೆ ಕೂಗಿದರು. ಈ ವೇಳೆ ಕೆಲವು ಕಿಡಿಗೇಡಿಗಳು ಶಾಂತಿಯುತ ಪ್ರತಿಭಟನೆಯನ್ನು ಕೆಡಿಸಲು ಪ್ರಯತ್ನಿಸಿದಾಗ, ಪೊಲೀಸರು ಮಧ್ಯಸ್ಥಿಕೆ ವಹಿಸಿ ಅವರನ್ನು ಸ್ಥಳದಿಂದ ತೆರವುಗೊಳಿಸಿದರು.

ನಂತರ ಸಿಯುಕೆ ರಿಜಿಸ್ಟ್ರಾರ್ ಪ್ರೊ. ಆರ್.ಆರ್. ಬಿರಾದಾರ್ ಮನವಿ ಸ್ವೀಕರಿಸಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಆದರೆ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣ ಮುಚ್ಚಿಹಾಕಿರುವುದು ಹಾಗೂ ಕೋಮುವಾದಿ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರ ಕುರಿತು ಪ್ರತಿಭಟನಾಕಾರರು ಪ್ರಶ್ನೆ ಎತ್ತಿದರು. ಇದಕ್ಕೆ ಪ್ರತಿಯಾಗಿ, ರಿಜಿಸ್ಟ್ರಾರ್ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ, ಪದ್ಮಿನಿ ಕಿರಣಗಿ, ಲವಿತ್ರ ವಸ್ತ್ರದ, ಸುಜಾತ ವೈ, ಸರ್ವೇಶ್ ಮಾವಿನಕರ, ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ, ಸಲ್ಮಾನ್ ದೇವಂತಗಿ, ಪ್ರಮೋದ ಪಾಂಚಾಳ, ವಿಜಯಲಕ್ಷ್ಮಿ ಗಡ್ಡೆ, ಚಂದಮ್ಮ ಗೋಳಾ, ಮಲ್ಲಿಕಾರ್ಜುನ್ಮಾ ಶೃಂಗೇರಿ,ರುತಿ ಗೋಖಲೆ, ಕಾ. ಮಹೇಶ್ ರಾಠೋಡ, ಮೌಲಾ ಮುಲ್ಲ, ಜನಾರ್ಧನ್ ಮತ್ತಿತರರು ಭಾಗವಹಿಸಿದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Leave a Reply

Your email address will not be published. Required fields are marked *