2003ರಲ್ಲಿ ಕಾಣೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಪ್ರಕರಣ ಮತ್ತೆ ಬೆಳಕಿಗೆ – ತಾಯಿಯ ಕಣ್ಣೀರಿನ ಹೋರಾಟಕ್ಕೆ ಹೊಸ ನಿರೀಕ್ಷೆ
2003ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರ ಜೊತೆ ಬಂದಿದ್ದ ಮಣಿಪಾಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಭಟ್ ಆ ದಿನದಿಂದ ಇಂದಿಗೂ ನಾಪತ್ತೆಯಾಗಿದ್ದಾಳೆ. ದೇವಸ್ಥಾನಕ್ಕೆ ದರ್ಶನಕ್ಕೆ ಬಂದು, ಸ್ನೇಹಿತೆಯರು ಅಂಗಡಿಗೆ ಹೋದಾಗ ಅನನ್ಯ ಒಬ್ಬಳೇ ನಿಂತಿದ್ದಳು. ಆದರೆ, ಕೆಲವೇ ನಿಮಿಷಗಳಲ್ಲಿ ಆಕೆ ಮಾಯವಾಗಿದ್ದಾಳೆ. ತಾಯಿ ಸುಜಾತಾ ಭಟ್ ಅವರ ದೂರನ್ನೂ ಪೊಲೀಸರು ಅಂದಿನಿಂದ ತಳ್ಳಿಹಾಕಿದ್ದರು ಎನ್ನಲಾಗಿದೆ.
ಈಗ, 22 ವರ್ಷಗಳ ನಂತರ ಧರ್ಮಸ್ಥಳದ ಹತ್ತಿರ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಅಘಾತಕಾರಿ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ತಕ್ಷಣ, ತಾಯಿ ಮನಸ್ಸಿನಲ್ಲಿ ಮಗಳ ಬಗ್ಗೆ ಹೊಸ ಅನುಮಾನ ಜಾಗೃತವಾಗಿದೆ. “ಅದರಲ್ಲಿ ನನ್ನ ಮಗಳ ಶವವಿದ್ದರೆ, ಅದನ್ನಾದರೂ ಸಾಬೀತು ಮಾಡಿ, ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಬೇಕು” ಎನ್ನುವುದು ಅವರ ಎದೆಬೀಳುವ ಬಯಕೆ.
ಈ ಆಧಾರದ ಮೇಲೆ ಸುಜಾತಾ ಭಟ್ ಈಗ ಅಧಿಕೃತ ದೂರು ದಾಖಲಿಸಿದ್ದು, ದಕ್ಷಿಣ ಕನ್ನಡ ಪೊಲೀಸರು ಪ್ರಕರಣವನ್ನು ಪುನಃ ತನಿಖೆಗೆ ತೆಗೆದುಕೊಂಡಿದ್ದಾರೆ. ಧರ್ಮಸ್ಥಳದ ಶವಗಳ ರಹಸ್ಯ ಮತ್ತು ಅನನ್ಯಾಳ ನಾಪತ್ತೆ ಪ್ರಕರಣ ಒಂದೇ ತಳಹದಿಯಲ್ಲಿ ಬೆಸೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಇದೀಗ ಪೊಲೀಸ್ ತನಿಖೆಯ ಮೇಲಿದೆ.