ಆಳಂದ: ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಕಲಿ ವೈದ್ಯರೊಬ್ಬರ ಮೇಲೆ ದಾಳಿ ನಡೆಸಿ, ಬಳಿಕ ಕೆಲ ಆಸ್ಪತ್ರೆಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದು, ಹಲವು ವರ್ಷಗಳಿಂದ ನಿರ್ಲಕ್ಷಿತದಲ್ಲಿದ್ದ ವೈದ್ಯಕೀಯ ನಿಯಂತ್ರಣವನ್ನು ಹಠಾತ್ ಜಾಗೃತಗೊಳಿಸಿದಂತಾಗಿದೆ.
ನಕಲಿ ವ್ಯಕ್ತಿಗಳ ಆಸ್ಪತ್ರೆಯನ್ನು ನಡಸುತ್ತಿದ್ದ ಮೂವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ, 10 ಜನರ ಮೇಲೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬುರೆ ಮಂಗಳವಾರ ತಿಳಿಸಿದ್ದಾರೆ.ಇದನ್ನು ಕೆಲವರು ಆರೋಗ್ಯ ಇಲಾಖೆಯ ಎಚ್ಚರಿಕೆಯ ಕ್ರಮವಾಗಿ ಶ್ಲಾಘಿಸುತ್ತಿದ್ದಾರೆ ಎಂಬುದಾದರೆ, ಇನ್ನೊಂದು ವಲಯದಿಂದ ಇದನ್ನು ಏಕಾಏಕಿ ನಡೆದ ಪ್ರಚೋದಿತ ಕ್ರಮವೆಂದು ಪ್ರಶ್ನಿಸಲಾಗುತ್ತಿದೆ.
ಸ್ಥಳೀಯ ಮೂಲಗಳ ಪ್ರಕಾರ, ಆರ್‍ಎಂಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಯಾವುದೇ ರೀತಿಯ ದೂರು ನೀಡಿಲ್ಲ. ಹೊರಗಿನ ಕೆಲ ವ್ಯಕ್ತಿಗಳ ದೂರಿನ ಹಿನ್ನೆಲೆ ಈ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.ಅದೇ ವೇಳೆ, ಆರೋಗ್ಯಾಧಿಕಾರಿಗಳು ಈ ದಾಳಿಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ಏಕೆ ಹಿಂದೇಟು ಹಾಕಿದರು? ಇದರಿಂದಾಗಿ ಇಡೀ ಪ್ರಕ್ರಿಯೆಯು ಪಾರದರ್ಶಕತೆ ಕೊರತೆಯೊಂದನ್ನು ಸೂಚಿಸುತ್ತಿದೆಯೆಂಬ ಅಸಮಾಧಾನ ಕೂಡ ಕೇಳಿಬರುತ್ತಿದೆ.
ಸಮಾಜದಲ್ಲಿ “ನಕಲಿ” ಎಂದು ಕೀಳಾದರಗೊಳ್ಳುತ್ತಿರುವ ಆರ್‍ಎಂಪಿ ವೈದ್ಯರ ಸ್ಥಿತಿಗತಿ, ಗ್ರಾಮೀಣ ಪ್ರದೇಶದ ಜನರಿಗೆ ದೊರೆಯುತ್ತಿರುವ ಶಸ್ತ್ರಚಿಕಿತ್ಸಾ ಸೇವೆಗಳ ಕೊರತೆ, ಹಾಗೂ ಆರೋಗ್ಯ ಇಲಾಖೆಯ ಕಾರ್ಯಪದ್ಧತಿಗಳ ಕುರಿತ ವಿವಾದ ಮತ್ತಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ.
ಆರ್‍ಎಂಪಿ ವೈದ್ಯರು ನಕಲಿ ಎನ್ನುವದರ ವಿರುದ್ಧದ ದಾಳಿಗೆ ಆಕ್ರೋಶದ ಧ್ವನಿ
ಟಿಎಚ್‍ಒ ಕ್ರಮದ ಹಿನ್ನೆಲೆ ಪ್ರಶ್ನೆಗೆ ಕಾರಣವಾಗಿದೆ ಪಟ್ಟಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ (ಟಿಎಚ್‍ಒ) ನೇತೃತ್ವದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದಿರುವ ಆರ್‍ಎಂಪಿ ವೈದ್ಯರ ವಿರುದ್ಧದ ದಾಳಿ ಭಾರೀ ಚರ್ಚೆಗೆ ಕಾರಣವಾಗಿದೆ. ಹದಗೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ತಾತ್ಕಾಲಿಕ ವೈದ್ಯರ ಸೇವೆ ಮೇಲೆ ಸಾರ್ವಜನಿಕರ ಅವಲಂಬನೆ, ಹಾಗೂ ಕೆಲವು ವೈದ್ಯರುಗಳ ಆಕ್ರೋಶ ಈ ಚರ್ಚೆಗೆ ಮತ್ತಷ್ಟು ಉರಿಯನ್ನು ಹಾಕಿವೆ.
ಹೆಸರು ಹೇಳಲು ಇಚ್ಛಿಸದ ಪ್ರಥಮ ಚಿಕಿತ್ಸಕರೊಬ್ಬರು, “ಬಂಗಾಳದಿಂದ ನಕಲಿ ವೈದ್ಯರು ಬಂದು ಇಲ್ಲಿ 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮವಿಲ್ಲ. ಬದಲಾಗಿ, 50 ರಿಂದ 100 ರೂಪಾಯಿ ಖರ್ಚಿನಲ್ಲಿ ಗ್ರಾಮೀಣ ಜನರಿಗೆ ಸೇವೆ ನೀಡುವ ನಮ್ಮಂತಹ ಆರ್‍ಎಂಪಿ ವೈದ್ಯರ ಮೇಲೆ ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದಾರೆ,” ಎಂದು ಗಂಭೀರ ಆರೋಪವನ್ನು ಹೊರಿಸಿದರು.
ಅವರು ಮುಂದಾಗಿ, “ಇಲ್ಲಿ ಬಹುತೇಕ ಬಿಎಂಎಸ್ ವೈದ್ಯರು ಆಲೋಪತಿ ಪದ್ದತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗಿದ್ದರೆ ಎಲ್ಲರ ಮೇಲೂ ಒಂದೇ ಪ್ರಮಾಣದ ಕ್ರಮ ಜರುಗಿಸಬೇಕು. ಪಿಎಚ್‍ಸಿಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ, ಸೀಸೇರಿಯನ್‌ನಂತಹ ತುರ್ತು ಚಿಕಿತ್ಸೆ ಲಭ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಜನರು ನಮ್ಮನ್ನು ಅವಲಂಬಿಸುತ್ತಾರೆ. ನಮ್ಮ ಸೇವೆಯು ಹಣಕ್ಕೋಸ್ಕರವಲ್ಲ, ಬದುಕಿಗಾಗಿ ಮತ್ತು ಸಮಾಜ ಸೇವೆಗಾಗಿ,” ಎಂದು ನುಡಿದರು.
ಖಾಸಗಿ ಪ್ರಥಮ ಚಿಕಿತ್ಸಕರ ಸಂಘದ ವ್ಯಕ್ತಿಯೊಬ್ಬರು ಟಿಎಚ್‍ಒ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವರು ರಾಜಕೀಯ ಪ್ರೇರಿತ ದೂರಿನ ಆಧಾರದಲ್ಲಿ ಈ ದಾಳಿ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. “ಟಿಎಚ್‍ಒ ಅವರು ಶಾಸಕರ ಊರಾದ ಸರಸಂಬಾದಲ್ಲಿ ಎರಡು ಪ್ರಥಮ ಚಿಕಿತ್ಸಕರ ಆಸ್ಪತ್ರೆಗಳಿಗೆ ಬೀಗ ಹಾಕಿದರು. ಆದರೆ, ಬಹುತೇಕ ಆಸ್ಪತ್ರೆಗಳು ಮರುತೊಡಕಾಗಿವೆ. ಈ ಕ್ರಮದ ಪಾರದರ್ಶಕತೆ ಪ್ರಶ್ನೆಯಾಗಿದೆ,” ಎಂದು ಆರೋಪಿಸಿದರು.
ಟಿಎಚ್‍ಒ ಅವರು ಇತ್ತೀಚೆಗೆ 62 ವರ್ಷದ ನಿವೃತ್ತ ಆರ್‍ಎಂಪಿ ವೈದ್ಯರೊಬ್ಬರಿಗೆ ಕರೆ ಮಾಡಿ, “ನೀನು ಇನ್ನೂ ಅನಧಿಕೃತ ವೈದ್ಯಕೀಯ ಸೇವೆ ನೀಡುತ್ತೀಯಾ?” ಎಂದು ಪ್ರಶ್ನಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ತಕ್ಷಣವೇ ಆ ವೈದ್ಯರು, “ಇತ್ತೀಚೆಗೆ ವೈದ್ಯಕೀಯ ಸೇವೆ ಬಿಟ್ಟು ಹೊಲದ ಕೆಲಸದಲ್ಲಿ ತೊಡಗಿದ್ದೇನೆ” ಎಂದು ಉತ್ತರಿಸಿದಂತೆ, ಟಿಎಚ್‍ಒ ಅವರು, “ಅದನ್ನು ಲಿಖಿತವಾಗಿ ನೀಡು” ಎಂದು ಕೇಳಿದ್ದರೆನ್ನಲಾಗಿದೆ. ನಂತರ ಮತ್ತೆ ಅವರಿಂದ ಸಂಪರ್ಕವಾಗಿಲ್ಲವೆಂದು ಹೆಸರು ಬಳಸಲಿಚ್ಛಿಸಿದ ಆರ್‍ಎಂಪಿ ತಿಳಿಸಿದ್ದಾರೆ.
ಮೂಲ ಸಮಸ್ಯೆಗೆ ಸ್ಪಷ್ಟತೆ ಬೇಕು
ಗ್ರಾಮೀಣ ಭಾಗಗಳಲ್ಲಿ ಸರಕಾರದ ಆರೋಗ್ಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣದಿಂದ ಜನ ಆರ್‍ಎಂಪಿ ವೈದ್ಯರ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಹಿನ್ನೆಲೆ, ಸರ್ಕಾರ ಈ ತಾತ್ಕಾಲಿಕ ವೈದ್ಯರಿಗೆ ತರಬೇತಿ ನೀಡಿ, ಸೂಕ್ತ ಹುದ್ದೆಗಳಲ್ಲಿ ನೇಮಕ ಮಾಡುವ ಮಾದರಿಯನ್ನು ರೂಪಿಸಬೇಕೆಂಬ ಒತ್ತಾಯವೂ ಸಾಮಾಜಿಕ ವರ್ಗಗಳಿಂದ ಮೂಡಿಬರುತ್ತಿದೆ.
ಈ ನಡುವೆ ಟಿಎಚ್‍ಒ ಅವರ ಈ ಕ್ರಮವು ಸಕಾರಾತ್ಮಕ ಆರೋಗ್ಯ ನೀತಿಯ ಭಾಗವೇ ಅಥವಾ ನಿರ್ದಿಷ್ಟ ಗುರಿ ಹೊಂದಿದ ಪ್ರತಿಸ್ಪಂದನೆಯೋ ಎಂಬ ಪ್ರಶ್ನೆಗಳಿಗೆ ಉತ್ತರ ಮಾತ್ರ ಇನ್ನೂ ನಿರೀಕ್ಷಿತವಾಗಿದೆ.
ಕಲಬುರಗಿಯ ವ್ಯಕ್ತಿಯೊಬ್ಬರು ದೂರು ನೀಡಿದ ಆಧಾರದ ಮೇಲೆ ಮೂರು ನಕಲಿ ಆಸ್ಪತ್ರೆಗಳ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದರ ಹೊರತಾಗಿ, ಆಸ್ಪತ್ರೆಯ ಪರವಾನಿಗೆ ಅಥವಾ ವೈದ್ಯರಿಗೆ ಅವ್ಯವಸ್ಥೆ ಕಂಡು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಇಬ್ಬರಿಗೆ ನೋಟಿಸ್ ನೀಡಲಾಗಿದೆ. ಇನ್ನೂ 8–10 ಜನ ನಕಲಿ ವೈದ್ಯರ ಪಟ್ಟಿ ಇದೆ. ಇಂಥ ಪ್ರಕರಣಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಉಳಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ದಿನಕ್ಕೆ ಒಂದೋ ಅಥವಾ ಎರಡನ್ನೋ ಮಾತ್ರ ಪರಿಶೀಲಿಸಬಹುದು. ಎರಡ್ಮೂರು ದಿನಗಳ ಕಾಲ ರಜೆಗೆ ಹೋಗುತ್ತಿರುವೆನು ಎಂದು ಡಾ. ಸುಶೀಲಕುಮಾರ ಅಂಬುರೆತಾಲೂಕು ಆರೋಗ್ಯಾಧಿಕಾರಿ, ಆಳಂದ ಅವರು ತಿಳಿಸಿದ್ದಾರೆ.