ಆಳಂದ ದಲ್ಲಿ ಹೊಸ ರಾಜಕೀಯ ಅಲೆಗುತ್ತೇದಾರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿದ ಹಲವು ಮುಸ್ಲಿಂ ಮುಖಂಡರು

ಆಳಂದ : ಬುಧವಾರ ಆಳಂದದಲ್ಲಿ ರಾಜಕೀಯ ಹೊಸ ಬೀರುಗಾಳಿ ಅಲೆ ಬೀಸಿದಂತೆ ಘಟನೆಯೊಂದು ನಡೆದಿದೆ. ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಆಳಂದದಲ್ಲಿ ಮುಸ್ಲಿಂ ಮುಖಂಡರು ಬೆನ್ನೆಡಿಯುವುದು, ಮತ್ತು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಅವರ ತೆಕ್ಕೆಗೆ ಸೇರುವ ಮೂಲಕ ರಾಜಕೀಯವಾಗಿ ಭಾರೀ ಶಾಕ್ ನೀಡಿದೆ. ಇದರಿಂದಾಗಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಹೊಸ ಇನ್ನಿಂಗ್ಸ್ ಆರಂಭವಾಗಿರುವುದು ಸ್ಪಷ್ಟವಾಗಿದೆ.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷದ ಪರವಾಗಿದ್ದ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರ ಹರ್ಷಾನಂದ್ ಗುತ್ತೇದಾರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ಕಾರ್ಯಕ್ರಮ ಟಿಪ್ಪು ಸುಲ್ತಾನ್ ಚೌಕ್ ನಲ್ಲಿ ನಡೆಯಿತು. ಇದರೊಂದಿಗೆ ಯುವ ಮುಖಂಡ ಸಲೀಂ ಜಮಾದಾರ ಅವರ ಜನ್ಮದಿನ ಕಾರ್ಯಕ್ರಮವೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಮುಸ್ಲಿಂ ಕಾರ್ಯಕರ್ತರು ಬಿಜೆಪಿ ಸೇರಿ, ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

“ನಾವು ಕಾಂಗ್ರೆಸ್ ಪಕ್ಷದ ವಿರುದ್ಧವಲ್ಲ. ಆದರೆ ಶಾಸಕರಾದ ಬಿಆರ್ ಪಾಟೀಲ ಅವರ ಆಡಳಿತ ನಿರ್ಲಕ್ಷ್ಯ, ಸಾರ್ವಜನಿಕ ಸಂಪರ್ಕದ ಕೊರತೆ, ಜನರಿಗೆ ಲಭ್ಯವಿಲ್ಲದ ಸ್ಥಿತಿ, ಸದಾ ವಿಐಪಿ ಪ್ರೋಟೋಕಾಲ್ ಪಾಲನೆಯು ನಮ್ಮ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ತಮ್ಮ ಜವಾಬ್ದಾರಿಯನ್ನು ತಮ್ಮ ಸಹೋದರರ ಪುತ್ರ ರಾಮಚಂದ್ರ ಪಾಟೀಲ ಅಲಿಯಾಸ್ ಆರ್.ಕೆ. ಪಾಟೀಲ ಅವರಿಗೆ ಬಿಟ್ಟಿದ್ದಾರೆ. ಇದರಿಂದ ಆಳಂದ ತಾಲ್ಲೂಕಿನ ಆಡಳಿತ ಕುಸಿದಿದೆ. ಕೆಲವೇ ಜನರಿಗೆ ಆದ್ಯತೆ ಸಿಗುತ್ತಿದೆ, ಉಳಿದ ಸಮುದಾಯದವರು ನಿರ್ಲಕ್ಷಿತವಾಗುತ್ತಿದ್ದಾರೆ,” ಎಂದು ಜಮಾದಾರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್ ವಾಗ್ದಾಳಿ ನಡೆಸಿ ಹೇಳಿದರು:

“ಬಿಆರ್ ಪಾಟೀಲ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮನೆ ಹಂಚಿಕೆಯ ವಿಷಯದಲ್ಲಿ ಮುಸ್ಲಿಂ ಮುಖಂಡ ಜಮೀರ್ ಅಹಮದ್ ಖಾನ್ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ. ಇದು ಸಮುದಾಯದ ಗೌರವಕ್ಕೆ ಧಕ್ಕೆ ತಂದಿದೆ,” ಎಂದು ಹೇಳಿದರು.

ಬಿಜೆಪಿಗೆ ಬೆಂಬಲ ಸಮುದಾಯದ ನಿಲುವಿನಲ್ಲಿ ಬದಲಾವಣೆ

ಟಿಪ್ಪು ಸುಲ್ತಾನ್ ಚೌಕ್ ಅಧ್ಯಕ್ಷ ಸೈಯದ್ ಜಾಕಿರ್ ಅಹಮದ್ ಮತ್ತು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು. ಈ ಸೇರ್ಪಡೆ ಕೇವಲ ವ್ಯಕ್ತಿಗತ ರಾಜಕೀಯ ನಿರ್ಧಾರವಲ್ಲ; ಇದು ಒಂದು ಸಮುದಾಯದ ಮನಸ್ಥಿತಿಯ ಬದಲಾವಣೆಯ ಪ್ರತೀಕವಾಗಿ ಪರಿಗಣಿಸಲಾಗಿದೆ.

ಸೇರ್ಪಡೆಯಾದ ಕಾರ್ಯಕರ್ತರು ಹೇಳಿದರು:

“ಸುಭಾಷ್ ಗುತ್ತೇದಾರ್ ಅವರ ಜನಸ್ನೇಹಿ ವರ್ತನೆ, ಗ್ರಾಮೀಣ ಸಮಸ್ಯೆಗಳ ಬಗ್ಗೆ ಸ್ಪಂದನೆ ಮತ್ತು ಸಮುದಾಯದೊಂದಿಗೆ ನೇರ ಸಂಪರ್ಕ ಈ ತಿರುಗುಗಳಿಗೆ ಕಾರಣವಾಗಿದೆ.”

ವಿವಾದದಿಂದ ವಿಶ್ವಾಸದತ್ತ

ಹಜರತ್ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ನಡೆದ ರಾಘವ ಚೈತನ್ಯ ಲಿಂಗ ಪೂಜಾ ವಿವಾದದ ಹಿನ್ನೆಲೆ ಗುತ್ತೇದಾರ್ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶವಿತ್ತು. ಆದರೆ ಗುತ್ತೇದಾರ್ ಅವರು ಶಾಂತಿಯುತ ಮಾತುಕತೆ ಮತ್ತು ನೇರ ಸಂಪರ್ಕದ ಮೂಲಕ ಸಮುದಾಯದ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಂಡು, ಅವರ ವಿಶ್ವಾಸವನ್ನು ಮರಳಿ ಗೆದ್ದಿದ್ದಾರೆ. ರಾಜಕೀಯ ತಂತ್ರದ ಯಶಸ್ವಿ ಉದಾಹರಣೆ ಎಂದೇ ಇದನ್ನು ಗುರುತಿಸಲಾಗುತ್ತಿದೆ.

ಸಮ್ಮಾನಪೂರ್ವಕ ಕ್ಷಮೆ ಯಾಚನೆ ಕೇಳಿದ ಗುತ್ತೇದಾರ್ ಅವರ ಭಾವನಾತ್ಮಕ ಸ್ಪಷ್ಟತೆ

ಈ ವೇಳೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಮುಸ್ಲಿಂ ಸಮುದಾಯದವರ ಮುಂದೆ ಭಾವನಾತ್ಮಕವಾಗಿ ಕ್ಷಮೆ ಯಾಚಿಸಿದರು.”ನನ್ನಿಂದ ಅಥವಾ ನನ್ನ ಮಕ್ಕಳಿಂದ ಏನಾದರೂ ತಪ್ಪು ಸಂಭವಿಸಿದ್ದರೆ, ನಾನು ಇಂದು ನಿಮ್ಮೆಲ್ಲರ ಬಳಿಯಿಂದ ಕ್ಷಮೆ ಕೇಳುತ್ತೇನೆ,” ಎಂದು ಅವರು ನೇರವಾಗಿ ಹೇಳಿದರು.ಅವರ ಈ ಮನವಿ ಸಮುದಾಯದವರಿಂದ ಮೆಚ್ಚುಗೆ ಪಡೆದಿದ್ದು, ಜನತೆಗೆ ಮತ್ತಷ್ಟು ನಿಕಟವಾಗುವ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಕಾಂಗ್ರೆಸ್‌ಗೆ ಆತಂಕ, ಬಿಜೆಪಿಗೆ ಉತ್ಸಾಹ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿದ್ದರೂ, ಸ್ಥಳೀಯ ಮಟ್ಟದಲ್ಲಿ ಬಿಆರ್ ಪಾಟೀಲ ಅವರ ನಿರ್ಲಕ್ಷ್ಯಪೂರ್ಣ ಆಡಳಿತದಿಂದಾಗಿ ಕಾಂಗ್ರೆಸ್ ತನ್ನ ಮತದಾರರನ್ನು ಕಳೆದುಕೊಳ್ಳುವ ಹಂತದಲ್ಲಿದೆ. ಇದು ಪಕ್ಷದ ಪಾಲಿಗೆ ಎಚ್ಚರಿಕೆಯ ಘಂಟೆಯಂತಾಗಿದೆ.

Leave a Reply

Your email address will not be published. Required fields are marked *